Managing Director
 : 888 446 6703


ಆರ್ಥಿಕ ಶಿಸ್ತು ಹಾಗೂ ವೃತ್ತಿ ನೈಪುಣ್ಯ ಕೌಶಲ್ಯಗಳಿಂದ ವೈವಿಧ್ಯಮಯ ಕಾರ್ಯನಿರ್ವಹಣೆಯೇ ನಮ್ಮ ಅಸ್ತಿತ್ವ ಮತ್ತು ಪ್ರಗತಿಯ ಸಂಕೇತ.

ಸದಸ್ಯರಿಗೆ/ಸಾರ್ವಜನಿಕರಿಗೆ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಿ ಸಹಕಾರ ಕ್ಷೇತ್ರ ಕಾರ್ಯನಿರ್ವಹಿಸುತ್ತಾ ಬಂದಿದೆ. ಸರಕಾರದ ಅನೇಕ ಕಾರ್ಯಕ್ರಮಗಳ ನಿರ್ವಹಣೆಯನ್ನು ಸಹಕಾರ ಕ್ಷೇತ್ರ ಸಮರ್ಪಕವಾಗಿ ನಿರ್ವಹಿಸುತಾ ಬಂದಿದೆ ಇದಕ್ಕೆ ಪರ್ಯಾಯವಾದ ವ್ಯವಸ್ಥೆ ಇನ್ನೊಂದಿಲ್ಲ. ಹತ್ತು ಹಲವು ವಿಧವಾದ ಸಹಕಾರಿ ಸಂಸ್ಥೆಗಳು ಹಲವಾರು ವಿಧವಾದ ಚಟುವಟಿಕೆಗಳು ಈ ಕ್ಷೇತ್ರದಲ್ಲಿದ್ದು, ಸಹಕಾರಿ ಚಳುವಳಿ ಜನರ ಜೀವನ ಪದ್ಧತಿಯಾಗಿದೆ.

ಶ್ರೀ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ, ಶ್ರೀ ಶಿವರಾಮ ಮಾವಳ್ಳಿ, ಶ್ರೀ ಕೆ.ಹೆಚ್.ಪಾಟೀಲ, ಶ್ರೀ ಎಸ್.ಎಸ್. ಪಾಟೀಲ, ಶ್ರೀ ಕಡವೆ ಹೆಗಡೆ, ಶ್ರೀ ಅಜ್ಜಿಬಾಳ ಹೆಗಡೆ, ಶ್ರೀ ಬಂಟ್ವಾಳ ನಾರಾಯಣ ನಾಯಕ, ಶ್ರೀ ಕೆ.ವಿ.ಶಂಕರೇಗೌಡ, ಶ್ರೀ ವೀರಶೆಟ್ಟಿ ಕುಶನೂರ, ಶ್ರೀ ಧರ್ಮರಾವ ಅಫಝಲಪೂರ ಮುಂತಾದ ಅನೇಕ ಅಗ್ರಗಣ್ಯ ನಾಯಕರು ಹಾಗೂ ರಾಷ್ಟ್ರಮಟ್ಟದಲ್ಲಿ ಡಾ. ಡಿ.ಆರ್.ಗಾಡ್ಗಿಳ, ಶ್ರೀ ವೈಕುಂಠ ಮೆಹತಾ, ಡಾ. ಕುರಿಯನ್, ಶ್ರೀ ಎಲ್.ಸಿ.ಜೈನ್, ಶ್ರೀ ಮೋಹನ ಧಾರಿಯಾರವರಂತಹ ಅನೇಕ ಉತ್ತಮ ನಾಯಕತ್ವದಿಂದಲೆ ಇವತ್ತು ಸಹಕಾರ ಕ್ಷೇತ್ರ ಭದ್ರ ಬುನಾದಿಯೊಂದಿಗೆ ದೇಶದ ಅಭಿವೃದ್ಧಿಗೆ ಉತ್ತಮ ಆರ್ಥಿಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಸಹಕಾರ ವ್ಯವಸ್ಥೆ ಜೀವನದ ಪದ್ಧತಿಯಾಗಿ ಬೆಳೆದಿದೆ.

ಯಾವುದೇ ದೇಶದ ಯಾವುದೇ ಸಂಘ ಸಂಸ್ಥೆಗಳ ಸಂಘಟನೆಗಳ ಸಾಧನೆ, ಪ್ರಗತಿ ಅಭಿವೃದ್ಧಿಗಳಲ್ಲಿ ಮೂರು ವಿಷಯಗಳಿಗೆ ಪ್ರಾಧಾನ್ಯತೆ ನೀಡುವುದು ಅವಶ್ಯಕ. ಪ್ರಜೆಗಳ/ ಸಾರ್ವಜನಿಕರ/ ಸದಸ್ಯರ/ ಸಕ್ರಿಯ ಪಾಲುಗಾರಿಕೆ, ದಕ್ಷ/ ನಿಷ್ಠಾವಂತ/ ಕ್ರಿಯಾಶೀಲ ಹಾಗೂ ಪ್ರಾಮಾಣಿಕ ಸಿಬ್ಬಂದಿ ಮತ್ತು ಉತ್ತಮ ಪಾರದರ್ಶಕ/ ವೃತ್ತಿಪರ ಹಾಗೂ ದೂರದೃಷ್ಟಿಯುಳ್ಳ ಅನುಭವಿ ಆಡಳಿತ ಮಂಡಳಿ. ಈ ಎಲ್ಲವನ್ನು ಅರಿತಿರುವ ಹಾಗೂ ಸಮೂಹವನ್ನು ತನ್ನ ಜೊತೆಗೆ ನಡೆಸಿಕೊಂಡು ಹೋಗುವ ಅನುಭವಿ ಮತ್ತು ಪರಿಣಾಮಕಾರಿ ನಾಯಕತ್ವದಿಂದ ಮಾತ್ರ ಸಾಧನೆ ಸಾಧ್ಯ ಎಂಬುದು ಎಲ್ಲ ಸಾಧಕರ ಅನುಭವದ ಮಾತು. ಸಹಕಾರಿ ಕ್ಷೇತ್ರದಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ಮತ್ತು ಮನ್ನಣೆ ಇದೆ.

ರಾಜ್ಯದಲ್ಲಿ ಸೌಹಾರ್ದ ಸಹಕಾರಿಗಳ ನೋಂದಣಿ ಸಂಖ್ಯೆ 5000ಕ್ಕೆ ತಲುಪಿದೆ. ಸೌಹಾರ್ದ ಸಹಕಾರಿ ಕ್ಷೇತ್ರದ ಬೆಳವಣಿಗೆ ವೇಗವಾಗಿ ಸಾಗಿದೆ. ಜನ ಮನ್ನಣೆ, ಸರಕಾರದ ಪ್ರೋತ್ಸಾಹ ಹಾಗೂ ಸಹಕಾರಿಗಳ ಮತ್ತು ಸಾರ್ವಜನಿಕರ ಬೆಂಬಲದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ಬದಲಾವಣೆ ಜಗದ ನಿಯಮ. ಬದಲಾವಣೆಗೆ ಹೊಂದದ ವ್ಯಕ್ತಿ, ಸಂಸ್ಥೆ ಅಥವಾ ಸರಕಾರಗಳು ಅಭಿವೃದ್ಧಿಯನ್ನು ಸಾಧಿಸಲಾರವು. ಬದಲಿಗೆ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ, ಬದಲಾವಣೆಗೆ ಹೊಂದಿಕೊಳ್ಳುವುದು ಇಂದಿನ ಅಗತ್ಯತೆ ಮತ್ತು ಅವಶ್ಯಕತೆ.

ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣ ನೀತಿಗಳು ವಿಶ್ವದ ವ್ಯವಸ್ಥೆಯಾಗಿರುವಾಗ ಸಹಕಾರಿ ಸಂಸ್ಥೆಗಳು ಸಹ ವ್ಯವಸ್ಥೆಯ ಜೊತೆಯಲ್ಲಿ ಕಾರ್ಯನಿರ್ವಹಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಜಾಗತಿಕ ಆರ್ಥಿಕ ಹಿನ್ನೆಡೆಯ ಸಂದರ್ಭದಲ್ಲೂ ಸಹ ಸಹಕಾರಿ ಸಂಸ್ಥೆಗಳು ಹಿನ್ನೆಡೆಯನ್ನು ಕಂಡಿರುವುದಿಲ್ಲ ಎಂದು ಹಿರಿಯ ಸಹಕಾರಿಗಳ ಮಾತು. “ಸಹಕಾರ ಸಂಸ್ಥೆಗಳು ಉತ್ತಮ ರಾಷ್ಟ್ರವನ್ನು ನಿರ್ಮಾಣ ಮಾಡಬಲ್ಲವು ಮತ್ತು ವಿಪತ್ತಿನಲ್ಲೂ ಉತ್ತಮ ಕಾರ್ಯನಿರ್ವಹಿಸಬಲ್ಲವು” ಎಂದು ವಿಶ್ವ ಸಂಸ್ಥೆ ಹಾಗೂ ಅಂತರರಾಷ್ಟ್ರೀಯ ಸಹಕಾರ ಮೈತ್ರಿ ಸಂಸ್ಥೆಯವರ ವರದಿಗಳು ಹೇಳಿವೆ. ಆದ್ದರಿಂದ ಈ ಕ್ಷೇತ್ರವನ್ನು ಬಲಪಡಿಸುವ ಪ್ರಯತ್ನ ನಿರಂತರವಾಗಿ ನಡೆಯಬೇಕು ಅಲ್ಲದೇ ಸಹಕಾರಿ ಸಂಸ್ಥೆಗಳು ಸಹ ತಂತ್ರಜ್ಞಾನ ಉಪಯೋಗವನ್ನು ಪಡೆದುಕೊಂಡು ಸಹಕಾರಿಯ ಕಾರ್ಯಶೈಲಿಯಲ್ಲಿ ವೈವಿಧ್ಯೆತೆಯನ್ನು ಮತ್ತು ಹೊಸತನವನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕು ಮತ್ತು ಸಹಕಾರ ಚಳುವಳಿಯನ್ನು ಇನ್ನಷ್ಟು ಬಲಿಷ್ಟವಾಗಿಸಬೇಕು ಎಂಬುದು ನನ್ನ ಬಯಕೆ. ಇನ್ನೂ ಹೆಚ್ಚಿನ ಆರ್ಥಿಕ ಶಿಸ್ತನ್ನು ಮತ್ತು ವೃತ್ತಿ ನೈಪುಣ್ಯ ಕೌಶಲ್ಯತೆಗಳನ್ನು ತಾಂತ್ರಿಕತೆಯೊಂದಿಗೆ ಅಳವಡಿಸಿಕೊಂಡು ಕಾರ್ಯನಿರ್ವಹಿಸಿದಾಗ ಸಹಕಾರ ಚಳುವಳಿಯ ಸುಸ್ಥಿರ ಬೆಳವಣಿಗೆ ಆಗಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ ಎಂಬುದು ನನ್ನ ಅಭಿಪ್ರಾಯ. ನಾವು ಸಂಖ್ಯಾತ್ಮಕವಾಗಿ ಬೆಳೆಯಬೇಕುನಿಜ ಆದರೆ, ಗುಣಾತ್ಮಕ ಬೆಳವಣಿಗೆಯಿಂದ ಮಾತ್ರ ಸುಸ್ಥಿರ ಬೆಳವಣಿಗೆ ಎಂದು ನಾನು ನಂಬಿದ್ದೇನೆ. ಆದ್ದರಿಂದಲೇ “ಸೌಹಾರ್ದ ಸಹಕಾರಿಗಳ ನಡೆ ಗುಣಮಟ್ಟದ ಕಡೆ” ಎಂದು ಸಂಯುಕ್ತ ಸಹಕಾರಿಯ ಅತ್ಯಂತ ಮಹತ್ವದ ಪ್ರಸ್ತಕ ಗೋಷ ವಾಕ್ಯವನ್ನು ವಿನೂತನವಾಗಿ ಹೆಸರಿಸಿದೆ.

ವಂದನೆಗಳೊಂದಿಗೆ

ಇಂತಿ ತಮ್ಮ ಸಹಕಾರಿ ಬಂಧು
ಶರಣಗೌಡ ಜಿ. ಪಾಟೀಲ

 

Hit Counter by Digits

All rights Reserved ©Souharda.coop. Made by KM Global Techmanage Services