Sri G Nanajangouda


President
Vijayanagar
80954 19712

ಸೌಹಾರ್ದ ಸಹಕಾರಿಗಳು ಲಾಭಗಳಿಸುವ ಜೊತೆಗೆ ಸದಸ್ಯರಿಗೆ ಹೆಚ್ಚಿನ ಸೇವಾ ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದುವುದು ಹಾಗೂ ಬಲಿಷ್ಠ ಸಹಕಾರಿ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವುದು ಇಂದಿನ ಅಗತ್ಯತೆ.

ರಾಜ್ಯದ ಸೌಹಾರ್ದ ಸಹಕಾರಿಗಳ ಸಂಖ್ಯೆ ಈಗ 5042ರ ಗಡಿ ತಲುಪಿದೆ. ಸೌಹಾರ್ದ ಸಹಕಾರಿಗಳಿಂದಲೇ ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 1335 ಇ-ಸ್ಟಾಂಪಿಂಗ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಹಕಾರಿಗಳ ಸಂಖ್ಯೆ ಹೆಚ್ಚಾದಂತೆ ಸೌಹಾರ್ದ ಸಹಕಾರಿ ಕ್ಷೇತ್ರದ ಬಲಸಂವರ್ಧನೆ ಹೆಚ್ಚುತ್ತ ಹೋಗುತ್ತದೆ. ಸಾರ್ವಜನಿಕರ ಸಹಕಾರಿಗಳ ಮೆಚ್ಚುಗೆ ಪಡೆಯುತ್ತ ತನ್ನ ಜನಪ್ರೀಯತೆಯನ್ನು ವೃದ್ಧಿಸಿಕೊಳ್ಳುತ್ತ ಸಹಕಾರಿ ಕ್ಷೇತ್ರದ ಮುಖ್ಯವಾಹಿನಿಯಲ್ಲಿ ಬೆರೆತು ತನ್ನ ಅಸ್ತಿತ್ವವನ್ನು ತೋರ್ಪಡಿಸುತ್ತ ಇತರರನ್ನು ಆಕರ್ಷಿಸುತ್ತ ಅನೇಕ ಮಹತ್ವದ ರೀತಿಯ ಸಾಧನೆಗಳನ್ನು ಮಾಡುತ್ತ ಸಾಗುತ್ತಿರುವುದು ಸ್ವಾಗತಾರ್ಹ ಹಾಗೂ ಸಂತೋಷದಾಯಕ ವಿಷಯ. ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ದೋಷರಹಿತವಾಗಿ ಪಾರದರ್ಶಕತೆಯಿಂದ ಕೂಡಿರಬೇಕೆಂಬುದು ಸಂಯುಕ್ತ ಸಹಕಾರಿಯ ಅಪೇಕ್ಷೆಯಾಗಿದೆ.

ಸದಸ್ಯರಿಗೆ ಹಲವು ವಿಧವಾದ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಚಿಂತಿಸುವಾಗ ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿಯವರು ತಮ್ಮ ಸಂಸ್ಥೆಯ ಉದ್ದೇಶಗಳನ್ನು, ಸದಸ್ಯರು ಆಶಯಗಳನ್ನು, ಸಹಕಾರಿಯ ಸವಾಲುಗಳನ್ನು, ಸಹಕಾರಿಗೆ ಲಭ್ಯವಿರುವ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಂಡು, ಸಹಕಾರಿಯ ಅವಕಾಶಗಳನ್ನು ಮತ್ತು ಮಾರುಕಟ್ಟೆಯ ವೇಗವನ್ನು ಅರಿತು ಸಂಪೂರ್ಣ ವೃತ್ತಿಪರತೆಯಿಂದ ಹಾಗೂ ಪಾರದರ್ಶಕತೆಯಿಂದ ಕೆಲಸಮಾಡುವುದನ್ನು ರೂಢಿಸಿಕೊಳ್ಳಬೇಕಾಗಿದೆ. ನಮ್ಮ ಸಹಕಾರಿಯ ಕಾರ್ಯಚಟುವಟಿಕೆಗಳ ಬಗ್ಗೆ ಸದಸ್ಯರನ್ನು ನಿರಂತರ ಜಾಗೃತಿಗೊಳಿಸುತ್ತಿರುವ ಕಾರ್ಯ ನಡೆಯಬೇಕು. ಅವರು ನಮ್ಮ ಮಾಲಿಕರು. ಸದಸ್ಯರಿಂದ ಸದಸ್ಯರಿಗಾಗಿ ಸದಸ್ಯರೇ ನಿರ್ವಹಿಸುವ (ಸದಸ್ಯರ ಪರವಾಗಿ ಆಡಳಿತ ಮಂಡಳಿಯವರು ನಿರ್ವಹಿಸುವ) ವ್ಯವಸ್ಥೆಯಿದು ಎಂಬುದು ಆಡಳಿತ ಮಂಡಳಿಯವರ ಗಮನದಲ್ಲಿರಬೇಕು. ಅವರು ವಹಿಸಿಕೊಡುವ ಜವಾಬ್ದಾರಿಯನ್ನು ನಿರ್ವಹಿಸುವುದು ಆಡಳಿತ ಮಂಡಳಿಯವರ ಕರ್ತವ್ಯ. ಆಡಳಿತ ಮಂಡಳಿಯವರು ನೀಡುವ ಜವಾಬ್ದಾರಿಯನ್ನು ನಿರ್ವಹಿಸುವುದು ಸಿಬ್ಬಂದಿಯವರ ಕರ್ತವ್ಯವಾಗಿದೆ.

ಈ ರೀತಿಯ ಯಶಸ್ವಿ ಕಾರ್ಯನಿರ್ವಹಣೆಗೆ ನಿರಂತರ ಶಿಕ್ಷಣ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೌಹಾರ್ದ ಸಹಕಾರಿಗಳು ತಮ್ಮ ಸದಸ್ಯರಿಗೆ ಅಗತ್ಯವೆನಿಸುವ ಎಲ್ಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಮಾಡುವಿರಾಗಿ ಆಶಿಸುತ್ತೇನೆ. ರಾಜ್ಯದ ಎಲ್ಲ ಸೌಹಾರ್ದ ಸಹಕಾರಿಗಳು ಕಾನೂನಿನ ವ್ಯಾಪ್ತಿಯೊಳಗೆ ಶಿಸ್ತು ಹಾಗೂ ಬದ್ಧತೆಯಿಂದ ಸೌಹಾರ್ದ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಕಾರ್ಯನಿರ್ವಹಿಸುವಿರಾಗಿ ಆಶಿಸುತ್ತೇನೆ. ಸೌಹಾರ್ದ ಸಹಕಾರಿ ಕ್ಷೇತ್ರ ಅತ್ಯಂತ ಉತ್ತಮ ಗುಣಮಟ್ಟವನ್ನು ಹೊಂದಿ ಬೆಳೆಯಬೇಕು. ಅದಕ್ಕಾಗಿ ನೀವು ಬೆಳೆಯಬೇಕು. ನಿಮ್ಮ ಹಾಗೂ ಸೌಹಾರ್ದ ಸಹಕಾರಿ ಕ್ಷೇತ್ರದ ಬೆಳವಣಿಗೆ ನಮ್ಮ ಆಶಯ. ಬನ್ನಿ ನಾವು ನೀವು ಎಲ್ಲರೂ ಸೇರಿ ಈ ರಥವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸೋಣ.

(ಜಿ. ನಂಜನಗೌಡ )

ಅಧ್ಯಕ್ಷರು

 

All rights Reserved ©Souharda.coop